ಡೆಂಟೇಲಿಯಮ್ -
ಮೃದ್ವಂಗಿ ವಂಶ, ಸ್ಕಫಾಪೊಡ ವರ್ಗಗಳಿಗೆ ಸೇರಿದ ಒಂದು ಸಮುದ್ರವಾಸಿ ಅಕಶೇರುಕ. ಇದನ್ನು ಸಾಮಾನ್ಯವಾಗಿ ಆನೆಯ ಕೊಂಬು (ಎಲಿಫೆಂಟ್ ಟಸ್ಕ್) ಅಥವಾ ದಂತದ ಕವಡೆ (ಟಸ್ಕ್ ಷೆಲ್) ಎಂದು ಕರೆಯುವುದುಂಟು. ಇದರ ಚಿಪ್ಪಿಗೆ ಆನೆಯ ದಂತದ ಆಕಾರವಿರುವುದರಿಂದ ಈ ಹೆಸರುಗಳನ್ನು ಕೊಡಲಾಗಿದೆ. ಇದರಲ್ಲಿ ಮುನ್ನೂರಕ್ಕಿಂತಲೂ ಹೆಚ್ಚು ಪ್ರಭೇದಗಳಿವೆ. ಇವೆಲ್ಲವೂ ಇತರ ಮೃದ್ವಂಗಿಗಳಂತಿಲ್ಲ; ಇವಕ್ಕೆ ಬೇರೆಯೇ ಆದ ದೇಹದ ರಚನೆ ಉಂಟು. ಉದ್ದವಾದ ಮತ್ತು ದ್ವಿಪಾಶ್ರ್ವ ಸಮಾಂಗತೆಯನ್ನು ತೋರುವ ದೇಹ ಹಾಗೂ ಮ್ಯಾಂಟಲಿನ ಬಲ ಮತ್ತು ಎಡಭಾಗದ ಅಂಚುಗಳು ಮುಂದಿನ ಮತ್ತು ಹಿಂದಿನ ಕೊನೆಗಳನ್ನು ಬಿಟ್ಟು, ಉದರದ ಮಧ್ಯಭಾಗದಲ್ಲಿ ಕೂಡಿಕೊಂಡಿರುವುದು ಡೆಂಟೇಲಿಯಮಿನ ವಿಶಿಷ್ಟ ಲಕ್ಷಣಗಳಲ್ಲಿ ಎರಡು. ಮ್ಯಾಂಟಲಿನಿಂದ ಉತ್ಪತ್ತಿಯಾದ ನಾಳದಂಥ ಚಿಪ್ಪಿನ ಎರಡು ಕಡೆಯೂ ರಂಧ್ರಗಳಿವೆ. ಡೆಂಟೇಲಿಯಮ್ಮಿನಲ್ಲಿ ನಿರ್ದಿಷ್ಟವಾದ ತಲೆ ಇಲ್ಲ. ಮ್ಯಾಂಟಲ್ ಕುಹರದ ಮುಂತುದಿಯಲ್ಲಿ ಬಾಯೊಂದರಿಂದ ಹೊರತೆರೆಯುವ ಸಣ್ಣ ಚಾಚನ್ನೇ ತಲೆಯೆನ್ನಲಾಗುತ್ತದೆ. ಪಾದ ವರ್ತುಲಾಕಾರದ್ದಾಗಿದೆ. ಪಾದವನ್ನು ಮರಳು ತೋಡುವುದಕ್ಕೆ ಬಳಸಿಕೊಳ್ಳುವುದು. ಮರಳಿನಲ್ಲಿ ಹುದುಗಿಕೊಂಡಿದ್ದಾಗ ಇದರ ಚಿಪ್ಪಿನ ಹಿಂದಿನ ಭಾಗ ಮರಳಿನ ಮೇಲ್ಭಾಗದಲ್ಲಿ ಚಾಚಿಕೊಂಡಿರುತ್ತದೆ. ಡೆಂಟೇಲಿಯಮ್ಮನ್ನು ಮೊದಲು ಏಕಿಫಾಲ ವರ್ಗದ ಲ್ಯಾಮೆಲಿಬ್ರ್ಯಾಂಕಿಯೇಟದಲ್ಲಿ ಸೇರಿಸಲಾಗಿತ್ತು. ಆದರೆ, ಮ್ಯಾಂಟಲ್ ಮತ್ತು ತೋಡುವ ಪಾದಗಳನ್ನು ಬಿಟ್ಟರೆ, ಏಕಿಫಾಲಕ್ಕೂ ಡೆಂಟೇಲಿಯಮ್ಮಿಗೂ ಯಾವ ಹೋಲಿಕೆಯೂ ಇಲ್ಲವಾದ್ದರಿಂದ ಈಗ ಇದನ್ನು ಸ್ಕಫಾಪೊಡ ಎಂಬ ಪ್ರತ್ಯೇಕ ವರ್ಗಕ್ಕೆ ಸೇರಿಸಲಾಗಿದೆ.
(ಕೆ.ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ